Saturday, May 24, 2014

ನಿಸ್ವಾರ್ಥವಿರಲಿ...

ನಿಸ್ವಾರ್ಥವಿರಲಿ ನಿನ್ನ ನೆರವಲಿ, ಪರೋಪಕಾರದಲಿ.!
ಕಾಯದಿರು ಫಲ ನಿರೀಕ್ಷೆಯಲಿ...
ಮಾಡಿದ ಕರ್ಮವು ಕಳೆದುಹೋಗುವುದು..!
ಮನನವಿರಲಿ, ಬಿಟ್ಟ ಬಾಣವು ಎಂದೆಂದೂ
ಪುನಃ ಬತ್ತಳಿಕೆಗೆ ಮರಳಿಬರದು..!!

ಎಲ್ಲರಿಗೂ ಆದರ್ಶ ನೀನಾಗಿ
ನಿನ್ನ ಕಾಯಕವ ನೀಮಾಡುತ
ಮುನ್ನಡೆಯಬೇಕು ಎಂದೂ ಕಂಗೆಡದೆ..!
ಬಾರದ ಮಳೆಗೆ ಮರುಗುತ್ತಾ ತಲೆಮೇಲೆ
ಕೈ ಹೊತ್ತು ಕುಳಿತರೆ ಬರವೇ ನಿನಗೆ..!!

ದಿಟ್ಟ ನಡೆಯಿರಲಿ, ನೇರ ನುಡಿಯಿರಲಿ,
ಅನ್ಯ - ಪರರೆಂಬ
ತಾರತಮ್ಯವಿರದಿರಲಿ ಎಂತೆಂದರೆ;
ಪ್ರತಿಪಲಿಸಬೇಕು ನಿನ್ನ ವ್ಯಕ್ತಿತ್ವ
ಕಠೋರ, ತೀಕ್ಷ್ಣವಾದರೂ ಪ್ರಿಯವಾಗುವ ಅಮೂಲ್ಯ ವಜ್ರದಹಾಗೆ..!!

ನಿನ್ನೆಲ್ಲಾ ಸಹಾಯಗಳ ನೆನಪುಗಳನು
ಗಂಟುಕಟ್ಟಿ ದೂರದ ಜಗದಲಿಹೂತಿಟ್ಟು ಮರೆತುಬಿಡು..!
ದಯೆಯೇ ಧರ್ಮದ ಮೂಲವೆಂದೆನುವಂತೆ
ನಿನ್ನ ಮೇಲೆ ನೀನೇ ದಯೆತೋರಿದಾಗಲಷ್ಟೇ
ಪ್ರೇಮಜ್ಯೋತಿಯ ಬೆಳಗುತ್ತಾ
ಧರ್ಮ ಮಾರ್ಗದಲಿ ಮುನ್ನುಗ್ಗಬಹುದು ಎಳೆ ಮಗುವಂತೆ...!!

Thursday, May 15, 2014

ಅವಳು...

ಅವಳಾ... ಆ
ಪುಟ್ಟ ಹುಡುಗಿಯ ಕಂಗೊಳಿಸುವ
ಮುಗ್ಧ ನಗುವು, ನನಗಾಗಿ
ಹೆಣೆದ ಮಾಯಾಜಾಲದಿ
ಸಿಲುಕಿದ್ದ ನನ್ನೊಳಗೆ
ಅವಳದೇ ಚಿತ್ತಾರ ಮೂಡಿಸಿತ್ತು!!
ಆ ಚಕೋರಿಯ ತುಂಟಾಟಗಳು
ಭಾವನೆಗಳಲಿ ಬಂಧಗಳ ಬೆಸೆದಿತ್ತು!!

ಬೆರಗಾಗಿದ್ದೆ ಅವಳ ನೋಟಕೆ
ಆ ನಯನಕೆ
ಆತ್ಮಸ್ಥೈರ್ಯದ ಚಿಲುಮೆಯಂತಿದ್ದ
ದಿಟ್ಟ ದೃಷ್ಟಿಗೆ!!
ಕಣ್ಗಳೋ! ಕೋಲ್ಮಿಂಚೋ!!
ನೇರ ನಾಟಿತ್ತೆದೆಗೆ!
ನನ್ನ ವ್ಯಕ್ತಿತ್ವವನೇ ಮರೆಸಿ
ಮುತ್ತಿಡುವಂತೆ ಮಾಡಿತ್ತು...

ಮಹಲಾದರೇನು..? ಗುಡಿಸಿಲಾದರೇನು..?
ಕೋಟಿ ಕೊಡದಿದ್ದರೇನು..?
ನಗುವಿಗೆ ಯಾವುದೇ
ಹಂಗಿಲ್ಲದಿರುವಾಗ
ಯಾವ ಕೊರತೆಯಿದ್ದರೇನು..?
ಪರಮೈಶ್ವರ್ಯದೊಡತಿಯು
ಇವಳು ಸೌಂದರ್ಯವತಿ!
ನನ್ನ ಮಗಳಾಗದಿದ್ದರೇನು..?

ಮುತ್ತು ಮಣಿಗಳನ್ನ
ಒಂದೊಂದಾಗಿ ಹೆಕ್ಕಿ
ಪೋಣಿಸಿದಂತಾ ಆ ಹಲ್ಲುಗಳ
ದಿನವೂ ಲಂಚಕೊಟ್ಟು ಬಿರಿಸಿ
ಸಂತಸಪಡುತ್ತಿದ್ದೆ ಅಂದು..
ಬೇರೊಂದು ಮಗುವ
ಈ ಪಟದೊಳಗ್ಹೊಕ್ಕು
ಅವಳ ನೆನಪಾಗಿ ಬರೆದಿರುವೆ
ಸಮರ್ಪಣೆ ಅವಳಿಗೆಂದು....