Saturday, February 4, 2017

ಮುಖಗಳು...

ಧರ್ಮವೂ ಬಿಳುಪು, ಅಧರ್ಮವೂ ಬಿಳುಪು
ಎರಡೂ ನಾ ಒಪ್ಪುವ ಮುಖಗಳೇ
ಒಂದು ಮನುವಾದರೆ ಇನ್ನೊಂದು ಮಾರ್ಜಾಲ..

ಮಮತೆ ತಾಯಿ, ಮಾಯೆ ಮಲತಾಯಿ
ಎರಡೂ ಅಮೃತ ಪಲಕದ ಕಳಸಗಳೇ
ಒಂದು ಹಾಲಾದರೆ ಇನ್ನೊಂದು ಹಾಲಾಹಲ..

ಹಾಲ ನೆಕ್ಕಿ ವಿಷ ಕಕ್ಕುವ ಕುಲಗೇಡಿ ಸಂತತಿಯ
ಪ್ರಸವವೂ ಬೇನೆ, ಅಂತ್ಯವೂ ಬೇನೆ
ದೇವ ದೂತನ ಕೊರಳಲ್ಲಿ ರಕ್ಕಸ ಆಕ್ರಂದನ...

Saturday, October 31, 2015

ಕೊನೆಯದಲ್ಲವೋ ಅದು

ಕೊನೆಯದಲ್ಲವೋ ಅದು
ಕಪ್ಪೆಚಿಪ್ಪಿನೊಳಗೆ ತಣ್ಣಗೆ ಹುಟ್ಟಿದ್ದಲ್ಲವೋ,
ಎದೆಗೂಡಲ್ಲಿ ಬೆಚ್ಚಗೆ ಅಡಗಿ
ಸಿಹಿಜೇನ ಹೀರಿ
ನರಮಂಡಲದ ಬಸಿರ ಚೀರಿ
ನಿನ್ನ ಅಧರಗಳ ಸೋಕಿ
ನೀಲಾಕಾಶವ ಕೆಂಪಾಗಿಸಿದ್ದು
ಮಣಿಯಲ್ಲವೋ ಅದು,
ಕೃತಕವಲ್ಲವೋ.....

ಅಂದಲ್ಲವೋ, ಇಂದಿಗೂ 
ನೀ ದೇವನಂತಲ್ಲಾ, ನಾ ಭಕ್ತೆಯಂತಲ್ಲಾ
ಇರುಳ ತಾರೆಗಳೂ ಪಥ ಬದಲಿಸಿದರೂ
ಉರುಳೀ ಉರುಳೀ 
ನಿನ್ನೇ ಧ್ಯಾನಿಸಿದ್ದು ಜಪವಲ್ಲವೋ,
ಹರಕೆಯಿಲ್ಲದ, ಕಾಣಿಕೆಯಿಲ್ಲದ ಆರಾಧನೆ
ರೋಗವಲ್ಲವೋ ಇದು,
ಜಾಗರಣೆಯಲ್ಲವೋ.....

ಪದವಲ್ಲವೋ ಇದು
ಭಾವಕ್ಕೆ ಕನ್ನಡಿಯಿಲ್ಲವೋ,
ಅಕ್ಷರಗಳ ಹುಸಿನಗೆ ಸಾಕೆನಗೆ
ಉಸಿರ ಅಲೆಗಳಲ್ಲಿ ಏರಿಳಿತಗಳಿಲ್ಲ
ಮಾಮರದಲಿ ಚಿಲಿಪಿಲಿಗಳಿಲ್ಲಾ,
ನಯನಗಳಲಿ ಕದಡಿದೆ ನಿನ್ನ ಅಲಂಕಾರ
ಬಾಹುಗಳು ಮರೆತಿವೆ ತಾಳ,
ಮರಳ ಬೇಕಾದ್ದು ಸ್ವರಗಳಲ್ಲವೋ
ಹೊಮ್ಮ ಬೇಕಾದ್ದು ಸಂಗೀತವಲ್ಲವೋ
ರಾಗವಲ್ಲವೋ ಅದು,
ಹೃದಯದ ಮಿಡಿತವೋ... 
ಒಲವಿನ ಓಕುಳಿಯೋ...........

ಮಿಂಚುಗಣ್ಣಿನ ಕವಿ...

ಮಿಂಚುಗಣ್ಣಿನ ಕವಿ 
ಗೀಚುತ್ತಾನೆ ಕಾಲ್ಬೆರಳಲ್ಲೇ
ಗಿಡಮರ ಬಳ್ಳಿಗಳ
ನಿದ್ದೆಗೆಟ್ಟು ಬೆಳೆಸುತ್ತಾನೆ
ಮಾವು, ಹುಣಸೆ, ಹಲಸುಗಳ
ಹೀಚು ಕಾಯ ಹಿಚುಕದೆ
ಸುತ್ತಲೂ ಸುತ್ತೀ ಸುತ್ತೀ
ಬೆಚ್ಚನೆ ಕಾವಿಟ್ಟು  ಹಣ್ಣಾಗಿಸುತ್ತಾನೆ
ತನ್ನವಳ ಹೃದಯವ ಹಣ್ಣಾಗಿಸುತ್ತಾನೆ......Sunday, December 14, 2014

ಹೇ ತುಂತುರೇ...

ಹೇ ತುಂತುರೇ, 
ನೆನೆದರೂ 
ನೀ ತಣಿಸಲಿಲ್ಲ
ಎದೆಯಲ್ಲಿ
ಅವನಿತ್ತ ಬೇಗೆ...!

ಹೇ ಮಲ್ಲಿಗೆಯೇ,
ಕಣ್ಣಲ್ಲೇ ಸೆಣೆಸುವ
ತುಂಟನ
ಕೆನ್ನೆಗೆ ಎರಡು
ತಟ್ಟಾದರೂ ಹೋಗೇ...!!


 

ನನ್ನಲ್ಲೂ ಹಂಬಲವಿದೆ......!!


ಮನಸು ಮನಸುಗಳ
ಬಂಧನಕೆ ಮಿತಿಯ
ಪರಿಧಿಯುಂಟೇ ಹೊಳೆವ ಜಗದಲಿ...
ಒಲವ ಬಳ್ಳಿಯಲಿ....?

ಅತ್ತ ಸಾಗರದಂಚಿಂದ ಮೆಲ್ಲ ಮೆಲ್ಲನೆ ಮೂಡುತ್ತಿದ್ದ ಸೂರ್ಯ
ಅತಿ ಮೆಲ್ಲನೆ ಮೂಡುತ್ತಿದ್ದ ಸೂರ್ಯ...
ಇತ್ತ ಎದೆಯೊಳಗೆ ಮೆಲ್ಲಗೆ ಇಳಿಯುತಿದ್ದ
ಅತಿ ಮೆಲ್ಲಗೆ ಇಳಿದು ಅಲೆಯೆಬ್ಬಿಸುತಿದ್ದ ನನ್ನವ...
ಝಲ್ಲೆನಿಸುತ್ತಿದ್ದ..
ಸೋತೂ, ಸೋತೂ, ಗೆಲ್ಲುತ್ತಿದ್ದ
ಕಣಜದಲಿ ಬಚ್ಚಿಟ್ಟ ಹೃದಯಕೆ
ಕಚ್ಚೀ...ಕಚ್ಚೀ...ಕಚಗುಳಿಯಿಡುತ್ತಿದ್ದ.....

ಮುಟ್ಟದೆಯೇ ಮುದ್ದಿಸುವ ತುಂಟನ
ಕಣ್ಣ ನೋಟಕೆ ನಾಚಿ ನೀರಾದ ವದನ,
ನರನಾಡಿಗಳ ಸೆಳೆತ..
ಪರವಶತೆಯೋ...!!
ಕಾನನದಲಿ ಹರಿವ ಝರಿಯಲಿ ಮಿಂದು
ಮುಡಿಯಿಂದ ಕಾಲ ತುದಿಯವರೆಗೂ ರಮಿಸುತಾ
ಗಟ್ಟಿಯಾಗಿ ಬೆಸೆದ ನಾಗರ ಮಿಲನದಂತೆ.....

ಸೋತೆ ಒಮ್ಮೆ....ಈಗ...!!

ಕಣ್ಣು ಮುಚ್ಚಿದರೂ ಕಣಕಣದಲೂ
ರೋಮಾಂಚನದ ಕುಲುಕು ಸ್ಪರ್ಶ...
ರೋಮ ರೋಮದಲೂ
ಕಾಡುವ ಪ್ರೇಮಿಯ
ಮುತ್ತಿನ ಮೇಳ...
ಕೊಡುವವನೂ ಅವನೇ ನನಗೆ
ಕೊಟ್ಟು ಕೊಳ್ಳುವವನೂ ಅವನೇ
ತನುಮನದ ಒಡೆಯ....
ಪ್ರತಿ ಮುತ್ತಿನ ಖರೀದಿಗೆ ಸಾವಿರ ಮುತ್ತಿನ ಉಡುಗೊರೆ,
ನನ್ನಲ್ಲೂ ಹಂಬಲವಿದೆ......!!

Tuesday, November 18, 2014

ಹೆಜ್ಜೆಯನಿತ್ತಲ್ಲೆಲ್ಲಾ


ಹೆಜ್ಜೆಯನಿತ್ತಲ್ಲೆಲ್ಲಾ ತಣ್ಣನೆ ಝರಿಯ ಹರಿವು
ಸವಿಸಿ ಹೊತ್ತೋಯ್ತು ಪಾದದಡಿಯ ನೆರಳ..
ಕದಡಿ, ಕಲಕಿ
ಮರೆಸಿಹೋಯ್ತು ಮನದ ಮುಗ್ಧತೆಯ...

ಮುಂದೆ ನಡೆದ ಹಾದಿಯಲ್ಲಿ ಸಿಕ್ಕ
ಒರಟುಕಲ್ಲು ತರಚಿಹೋಯ್ತು ಮೊದಲೇ ತೆರೆದ ಗಾಯವ
ಚುಚ್ಚಿ, ನಕ್ಕು
ನೆಕ್ಕಿಹೋಯ್ತು ತಾನೂ ರಕ್ತದ ರುಚಿಯ...

ಕುಂಟು ನಡೆ, ಎಡವು, ಬೀಳು
ಎದ್ದು ಓಡಿದೆ, ಸುಸ್ತಾಗಿ ನಿಂತೆ ದಣಿದು,
ಊರುಗೋಲ ತಡಕು ಮನದಲಿ
ಸುತ್ತಲಿತ್ತು ಬರೀ ಮರಳುಗಾಡ ಮೌನ
ಛಾಯೆ ಸಿಗದೇ, ಬಳಲಿ ಬೆಂಡಾದೆ ಕಗ್ಗತ್ತಲಲ್ಲಿ....
 
 

Saturday, November 8, 2014

ತುಟಿ ಬಿಚ್ಚಿ ಹೇಳದ...ತುಟಿ ಬಿಚ್ಚಿ ಹೇಳದ
ಮನಗಳ
ಬೆಚ್ಚನೆಯ
ಭಾವಗಳ ಮಿಲನಕೆ
ಹುಣ್ಣಿಮೆಯ ಬೆಳದಿಂಗಳು
ಹೆಣೆದಿತ್ತು
ಸೋಬಾನೆ ಹಾಡ....

ಕುಡಿಮೀಸೆ ಚೆಲುವನ
ನೋಟಕೆ
ದಿಕ್ಕೆಟ್ಟು, ಅವಳ
ಎದೆಹೊಕ್ಕ ಕೋಗಿಲೆ
ಉಸಿರಿಡಿದು ಹಾಡಿತು
ಒಂದೇಸಮನೆ ತಾನಿತಂದಾನ....

ಅವಳಂದ ಚಂದ..
ಅವ ತುಂಟ ಬಂಡ..
ಬಿಡದೆ ಬಂದಿಸಿದ
ಕರವಿಡಿದು ಬರಸೆಳೆದು
ಮುಂಗುರುಳ ಸರಿಸಿ
ಬೇಡಿದ ಮುತ್ತಿನಹಾರ....

ಬಲು ದಾರಾಳಿಯವಳು
ಮೌನ ಬಂಗಾರಿ,
ನಕ್ಕು ಓಡಿದಳು
ಕೈ ಕಿತ್ತು
ಮುತ್ತಿನ ಕೊಪ್ಪರಿಗೆಯನ್ನೇ
ಕೈಗಿಟ್ಟು...
ಇರುವೆಗಳ ಬಾಯಲ್ಲೂ ಜೇನಿತ್ತು....