Tuesday, April 29, 2014

ಸಮಯನಿಷ್ಟೆ...

ಸಮಯ
ಸಮಯ
ಸಮಯ.....
ಜಾರುತಿದೆ ಕೈಯಿಂದ
ಬರೆಯುತ್ತಾ ಬಾಳ ಕೃತಿಯ
ಬೆರೆಸುತ್ತಾ ವಿಭಿನ್ನ ಶೃತಿಯ....

ಬಾಲ್ಯದಿ ಬೆಳೆವಾಸೆ
ಬೆಳೆದು ಅಮ್ಮನ ಸೀರೆಯಾಸೆ
ಉದ್ದನೆಯ ನೀರ್ಜಡೆಯಾಸೆ
ಕೈಬಳೆ ತೊಟ್ಟು ಕುಲುಕುವಾಸೆ
ಜುಮುಕಿ, ಕಾಲ್ಗೆಜ್ಜೆ, ಮಲ್ಲಿಗೆಯಾಸೆ
ಹೋ... ಈ ಲಜ್ಜೆ... ಆದರೂ
ಎಲ್ಲರ ಹೊಗಳಿಕೆಯಾಸೆ.....

ಸಮಯವೇ ತಂದಿತ್ತು
ಯೌವನವ ಉಡುಗೊರೆಯಾಗಿ
ಅದು, ಇದು ಎನುವುದರಲೇ
ಮಾಡಿ ಮಧುಮಗನ ಸಂಗಾತಿಯಾಗಿ
ಬರೆಯುತ್ತಾ ಬಾಳ ಕೃತಿಯ
ಬೆರೆಸುತ್ತಾ ಮೋಹಕ ಶೃತಿಯ....

ಬಾಳಲ್ಲವನ ಬೆಳಕಾಗುವಾಸೆ
ಪ್ರಿಯಕರನ ಮುದ್ದಿನ ಕಣ್ಮಣಿಯಾಗುವಾಸೆ
ಅವನ ತೋಳಲ್ಲಿ ಜಗಮರೆಯುವಾಸೆ
ಬೈತಲೆಯಲಿ ಕುಂಕುಮದಾಸೆ
ಕಾಲುಂಗುರ, ಮಾಂಗಲ್ಯ ಧರಿಸಿ ಮೆರೆಯುವಾಸೆ
ಹೋ... ದೊಡ್ಡವಳು... ಆದರೂ
ನಲ್ಮೆಯ ಹೊಗಳಿಕೆಯಾಸೆ......

ಸಮಯವೋ ಸಾಗಿದೆ
ಮರೆಯದೆ ಕರ್ತವ್ಯನಿಷ್ಠೆಯ
ಬರೆಯುತ್ತಾ ಬಾಳ ಕೃತಿಯ
ಬೆರೆಸುತ್ತಾ ಬಾಳಲ್ಲಿ ಒಲವಿನ ಶೃತಿಯ....

Saturday, April 26, 2014

ಅನ್ನದಾತ...

ಹುಂಜ ಕೂಗಿದ್ ಕೂಡ್ಲೇ
ಕೊಡವಿಕೊಂಡೆದ್ದ ಜುಂಜ
ಮುರ್ಕೊಂಡು ಬೇವ ಕಡ್ಡಿ
ತೀಡುತ್ತ ಹಲ್ಲು ಬಾಯ
ಶುರಚ್ಕೊಂಡ ಹೊಲ್ದ್ಯಾಗ್ ಕ್ಯಾಮಿ
ಹೊಡ್ದು ಮಜ್ಗೆ ಗಂಜಿಯ....

ಹೆಂಡ್ರು ಹೊತ್ತು ತಂದ
ಉಪ್ಸಾರು ಸೊಪ್ಪಿನೊಡನೆ
ಮುದ್ದೆ ಮುರಿದು ನುಂಗ್ದ
ಮೆಣಸ್ಕಾಯಿ ನೆಂಚಿಕೊಳ್ತ
ನಂಜೀಯ ಕೈ ಹಿಡ್ದು
ಕಣ್ಹೊಡ್ದು ಹಲ್ಲ ಬಿರಿದ....

ದಿನ್ವೆಲ್ಲ ದಣೀದೆ ಗೇದು
ಬೆವ್ರ ಸುರ್ಸಿ ಮೂಳೆಯಾದ್ರೂ
ಮುಖದಾಗೆ ತೇಜವಂತ
ಸೂರ್ಯಂಗು ಗೋಲಿ ಹೊಡ್ದ
ಮಳ್ಯಾಗೆ ಹಿಗ್ಗಿ ಕುಣಿದು
ಕಣಜಾವ ಜಡಿದು ತುಂಬಿ
ದೇಶಾದ ಹೊಟ್ಟೆ ಹೊರ್ದ
ನಮ್ಮೆಲ್ರ ಅನ್ನದಾತ....

ಹರಸ್ರೀ ನೀವೂ ಇವ್ನ
ತಣ್ಣಗಿರ್ಲಿ ಅಂತ....

ಹಕ್ಕಿಗಳಿಗೊಂದು ತುತ್ತು...

ರೆಕ್ಕೆ ಇದ್ದರೆ ಸಾಕೇ......
ಹಕ್ಕಿಗೆ ಬೇಕು ಬಾನು
ಹೊಟ್ಟೆಗೆ ಹೂವು ಹಣ್ಣು
ಬಾಯಿಗೆ ಗುಟುಕು ನೀರು
ಬದುಕೋಕೇ...
ಮರಳಿ ಬರೋಕೇ...
ಇಂಪ ಹರಡೋಕೇ.......

ಪಕ್ಷಿಗಳು ಬೆಂಗಳೂರಿಗೆ ಬರುತ್ತಿಲ್ಲ..
ಕಾರಣ ಏನೋ ಗೊತ್ತಿಲ್ಲ..

     ಮರಗಳ ಸಂಖ್ಯೆ ಕ್ಷೀಣಿಸುತ್ತರುವುದೇನೋ ನಿಜ, ಪಕ್ಷಿಗಳಿಗೆ ತಾವಿಲ್ಲ. ಆದರೆ ಇರುವ ಮರಗಳಲ್ಲೂ ಅವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಅಲ್ಲಲ್ಲಿ ಕೆರೆ ಕೊಳಗಳಿದ್ದರೂ ನೀರು ಕಲುಷಿತಗೊಂಡಿದ್ದು ಪಕ್ಷಿಗಳಿಗೆ ಕುಡಿಯಲು ಯೋಗ್ಯವಿಲ್ಲ. ಇದೇ ಯೋಚನೆ ನನ್ನನ್ನು ಬಹಳವಾಗಿ ಕಾಡುತ್ತಿತ್ತು.

    ಕೆಲವರು ಅನೇಕ ಉತ್ತಮ ಪರಿಹಾರ ಸೂಚಿಸಿದ್ದಾರೆ. ಮನೆಯ ಹೊರಗೆ ನೀರಿಡುವುದು, ಸಣ್ಣ ದಾನ್ಯ ಇಡುವುದು ಇತ್ಯಾದಿ. ನಾನೂ ಅನುಸರಿಸಿ ಪ್ರಯೋಜನ ಆಗಿದ್ದೇನೋ ನಿಜ. ಆದರೆ ಇದು ಶಾಶ್ವತ ಪರಿಹಾರವಲ್ಲ ಅನಿಸಿತು. ಎಲ್ಲರೂ ಇದನ್ನು ಅನುಸರಿಸಲು ಆಗದಿರಬಹುದು. ಮರೆತೇ ಹೋಗಬಹುದು.

     ಬಹಳ ದಿನಗಳಿಂದ ಹೀಗೇ ಯೋಚಿಸುತ್ತಿರುವಾಗ ನನಗೆ ಹೊಳೆದದ್ದು ಒಂದು ಮುಖ್ಯವಾದ ಅಂಶ. ಬೆಂಗಳೂರಿನಲ್ಲಿ ಈಗ ಎಲ್ಲಿ ನೋಡಿದ್ರೂ ಎಲೆ ಭರಿತ, ಇಲ್ಲವೇ ಹೂ ಬಿರಿದ ಮರಗಳು ಮಾತ್ರ ಇವೆ. ಹೀಗಾದಲ್ಲಿ ಪಕ್ಷಿಗಳು ತಿನ್ನುವುದಾದರೂ ಏನು? ನೀವೇ ಕಂಡಂತೆ ಮೊದಲು ಊರ ತುಂಬಾ ಆಲದ, ಅರಳಿ ಮುಂತಾದ ಮರಗಳಿದ್ದು, ಅಲ್ಲಿನ ಹಣ್ಣುಗಳು ಹಲವು ಪಕ್ಷಿಗಳ ಆಧಾರವಾಗಿತ್ತು. ಹಕ್ಕಿ ಗೂಡಿಗೆ ಆಶ್ರಯವಾಗಿದ್ದವು ಮರಗಳು. ಬದಲಾದ ಪರಿಸ್ಥಿತಿಗೆ ಮೇವಿನ ಅಭಾವವೂ ಒಂದು ಮುಖ್ಯ ಕಾರಣವಿರಬಹುದೇನೋ ಅನಿಸಿತು.

     ಇಂದಿಗೂ ಮನೆಯ ಮುಂದಿನ ಮರಗಳಲ್ಲಿ ಹಕ್ಕಿಗಳು ಹಣ್ಣು ತಿಂದು ಮನೆಯಂಗಳದಲ್ಲಿ ಗಲೀಜು ಮಾಡುತ್ತವೆಂದು ಮರವನ್ನೇ ಕಡಿದು ಹಾಕುತ್ತಲೇ ಇದ್ದಾರೆ. ಹಕ್ಕಿಗಳು ನೆಲೆಯಿಲ್ಲದೆ, ಹೊಟ್ಟೆ ಪಾಡಿಗಾಗಿ ವಲಸೆ ಹೋಗಲಾರಂಬಿಸಿವೆ.

      ಅದಕ್ಕೆ ನಿರ್ಧರಿಸಿದೆ ಪಕ್ಷಿಗಳಿಗೆ ಉಪಯೋಗವಾಗುವ ಗಿಡ ನೆಡಬೇಕೆಂದು. ಈಗ ಸಸಿಯನ್ನು ನೆಟ್ಟಿದ್ದೇನೆ ಮನೆಯ ಎದುರಲ್ಲಿ. ನೀರಿಡುವುದು, ಆಹಾರಕ್ಕಾಗಿ ಕಾಳು, ರಾಗಿ ಮುಂತಾದ ಬೀಜಗಳನ್ನು ಇಡುವುದನ್ನೂ ಮುಂದುವರೆಸಿದ್ದೇನೆ. ಇತರರಿಗೂ ತಿಳಿಸುತಿದ್ದೇನೆ. ನೀವೂ ಸಹಕರಿಸುತ್ತೀರಿ ಎಂಬ ಆಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳುವ ಉತ್ಸಾಹ ನನ್ನಲ್ಲಿ...

ಹಂಬಲ...

ನನ್ನಂತರಾಳದಿ ಅರಳಿದೆ
ನೀನು ಹೂವಂತೆ
ಬೇರೇನಾದರೂ ಆಗಬಾರದಿತ್ತೇ
ಮುದುಡದ ಸೂರ್ಯಕಾಂತಿಯಂತೆ...

ಸೋಲು...

ತಣ್ಣಗಾಗಿದೆ
ನಾಡಿ ಬಡಿತವು...
ನನ್ನಲ್ಲಿನ್ನೂ ಉಳಿದಿದೆ
ಬದುಕಲಾಗದಷ್ಟು ಉಸಿರು....

ಎಲ್ಲೋ ಕಂಡಂತೆ ನಿನ್ನನ್ನು...

ಎಲ್ಲೋ ಕಂಡಂತೆ
ನಾನು ನಿನ್ನನ್ನು
ಏಕೋ ಕಾಡುತೀ
ಹಗಲಿರುಳೂ ನನ್ನನ್ನು
ಏತಕೋ ನನ್ನಲೀ ಈ ರೀತೀ
ತುಂಬಿದೆ ನಿನ್ನದೇ ಪ್ರೀತೀ....

ಹಾಡಾದೆ ಮನದಲ್ಲೀ
ಬಂದಿಳಿದೇ ಕನಸಲ್ಲೀ
ನೂರೆಂಟು ಭಾವಗಳಾ
ಝೇಂಕಾರ ನುಡಿಸುತಲೀ
ಏತಕೋ ನನ್ನಲೀ ಈ ರೀತೀ
ತುಂಬಿದೇ ನಿನ್ನದೇ ಪ್ರೀತೀ....

ನೀನಿಂತೆ ಹೃದಯದಲೀ
ವಸಂತವು ಬಾಳಲ್ಲೀ
ನೂರೆಂಟು ಹೂವುಗಳಾ
ಸುಗಂಧವ ಬೀರುತಲೀ
ಏತಕೋ ನನ್ನಲೀ ಈ ರೀತೀ
ತುಂಬಿದೇ ನಿನ್ನದೇ ಪ್ರೀತೀ....

ಮಿತ್ರದ್ರೋಹಿ...

ನನ್ನ ಬೆರಳನ್ನೇ
ಹಿಡಿದು
ಮೇಲೇರ ಬಯಸಿದ
ನಿನಗೆ ನಾನೇ
ಮುಳ್ಳಾಗಿ ಕಂಡರೆ
ತಪ್ಪು ನನ್ನ ಕರುಣೆಯೋ
ಇಲ್ಲಾ ನಿನ್ನ ಮನದ ಕಿಚ್ಚೋ...??

ಬೇಡ, ಮಾಡದಿರು
ಗೆಳತಿ
ನೀನು ನನ್ನಿಂದ
ಕಲಿಯಬೇಕಾದ್ದು ಬಹಳಷ್ಟಿದೆ
ನನ್ನೊದೆದರೆ
ಆದೀಯೆ
ಅರೆ ಬೆಂದ ಮಡಕೆ....!!

ಹೃದಯಾಘಾತ...

ನವಿಲಂತೆ ನಲಿದದ್ದಷ್ಟೇ
ನೆನಪು
ನನ್ನೊಳಗೇನೋ ದುಗುಡ
ನನಗರಿವಿಲ್ಲ
ದಡಕ್ಕನೆ ಕುಸಿದು ಬಿದ್ದಂತ್ತೊಂದು
ತುಂಡು
ಮುಷ್ಟಿಗಾತ್ರದ್ದು
ವಿಕಾರ, ವಿಕೃತ ದೃಶ್ಯ
ಅಡ್ಡಡ್ಡ ಉದ್ದುದ್ದ
ಮನಬಂದಂತೆ
ಸೀಳಿದವರ್ಯಾರೋ ಇದ
ಆಗತಾನೇ ಕಿತ್ತ ಗೂಡಿಂದ
ಜಿನುಗುವ ಜೇನಂತೆ
ಹರಿಯುತಿದೆ
ಅದೇನೋ ಕೆಂಪಗೆ
ಹೊಲಸು ತಾಕಿತ್ತೇನೋ
ನಾಸಿಕವೂ
ಬಿಗಿಹಿಡಿದಿತ್ತು ಉಸಿರ
ಆದರೆ
ಅಲುಗಾಡಿಸದೆ
ಬೊಕ್ಕಸದಲ್ಲಿರಿಸಿ ಜೋಪಾನವಾಗಿ
ಎಳನೀರ ತಲೆಕೊಚ್ಚಿ
ಚಿಪ್ಪ ತೆಗೆವಂತೆ
ಯಾಕ್ಹೀಗೆ..... ಆಆಆಆಹ್...ಅಹ್

(ಕಣ್ಣುಗಳು ಮುಚ್ಚಿದವು)

ಚಿಟ್ಟೆಯಾಗಿ...

ನಿನ್ನ ನೆನಪೇ
ಕಾಡುತ್ತಿದೆ 
ಸುಪ್ತ
ಜ್ವಾಲಾಮುಖಿಯಾಗಿ..
ಕಡಿವಾಣವೆಲ್ಲವ ಕಳಚಿ
ಹಾರಿಬಂದಿರುವೆ
ನಿನಗಾಗಿ,
ಚಿಟ್ಟೆಯಾಗಿ....

ನಗೆ ಸಿಂಚನ...

ಅಪ್ಪ ಮಕ್ಕಳ
ಊರಗಲ
ಬಿರಿದ ಮೊಗದಲ್ಲಿ
ಬಾಯ್ತುಂಬಿ
ಚಿಮ್ಮುವ ನಗು,
ನಿತ್ಯವೂ ರೋಮಾಂಚನ...
ಅನುಕ್ಷಣವೂ ಸಂತಸದ ಸಿಂಚನ...

ಇಬ್ಬನಿ...

ಹನಿಯಾಗಿ
ಮೂಡಿ
ಗಾಳಿಯಲಿ
ನಯವಾಗಿ ಬೆರೆತು
ತಂಪನೀವ ಇಬ್ಬನಿಯು
ಪುಟ್ಟ ಹುಲ್ಲಿನ
ಜೊಲ್ಲು....

ಭಾವ ಸಾಗರದಲ್ಲಿ...

 
ಅಬ್ಬರಿಸಿದೆ ಈ ಹೃದಯ
ಮೈ ಮನಗಳ,
ಶಾಂತತೆಯ ಎಲ್ಲೆಮೀರಿ..
ಹೃದಯವೋ, ಒಡಲಾಳದಿ ಅಡಗಿ
ರೊಚ್ಚೆದ್ದ ಭಾವನೆಗಳ ಸಾಗರವೋ
ನೇಸರನ ಪ್ರಚೋದನೆಯೋ...
 
ಸುನಾಮಿ ಅಲೆಯಂತೆ
ಉಬ್ಬರಿಸಿ ಚಾಚುತ್ತಿದೆ
ಕರಣಗಳ ಪ್ರೀತಿಯತ್ತ..
ಅಲೆಯೋ, ಮನದಾಳದಿ ಬಲಿತು
ತೊಳಲಿರುವ ಕಾಮನೆಗಳ ಅಳಲೋ
ವಿರಹ ವೇದನೆಯೋ....
 
ಪ್ರವಹಿಸುತಿದೆ ರಭಸದಿ
ಕಡಲೊಡಲ ಮುತ್ತಿನಮಾಲೆ
ತೊಯ್ದಿಹಳು ಪ್ರೇಮಸಿಂಚನದಿ ಕುಸುಮಬಾಲೆ..
ಆತ್ಮಮಂಥನದ ಸುಳಿಯಲ್ಲಿ
ಮತ್ತದೇ ದ್ವಂದ್ವ,
ಕಂಪನವಿದು ವ್ಯಾಮೋಹವೋ
ಇಲ್ಲಾ ನಿಸರ್ಗದ ಸೊಗಸೋ..

Friday, April 25, 2014

ಅಮೃತಧಾರೆ...

ಮೈತುಂಬಿ ಜಲಲೆಯು
ವೈಯ್ಯಾರದಿ ನಡೆದಿಹಳು
ಕುಲಕುತ್ತಾ, ಬಳುಕುತ್ತಾ
ಹಾವಂತೆ.....
ಯಾರ ಹಂಗಿಲ್ಲದೇ
ಉಸಿರಾಗಿ ಪೊರೆವಳು
ಕೋಟಿ ಜನುಮವನೂ
ತಾಯಂತೆ.....
ಸಹ್ಯಾದ್ರಿಯಿಂದ ಇವಳ
ಕಾಡಿ ಬೇಡಿಯಾದರೂ
ನನ್ನಂಗಳಕೆ ತರುವಾಸೆ
ಭಗೀರಥನಂತೆ.....
ಯಾವ ದೇವರೋ
ಏನವನ ಸೃಷ್ಟಿಯೋ
ಸರಿಸಾಟಿ ಬೇರಿಲ್ಲ ಈ
ಅಮೃತಧಾರೆಯಂತೆ....