Thursday, May 15, 2014

ಅವಳು...

ಅವಳಾ... ಆ
ಪುಟ್ಟ ಹುಡುಗಿಯ ಕಂಗೊಳಿಸುವ
ಮುಗ್ಧ ನಗುವು, ನನಗಾಗಿ
ಹೆಣೆದ ಮಾಯಾಜಾಲದಿ
ಸಿಲುಕಿದ್ದ ನನ್ನೊಳಗೆ
ಅವಳದೇ ಚಿತ್ತಾರ ಮೂಡಿಸಿತ್ತು!!
ಆ ಚಕೋರಿಯ ತುಂಟಾಟಗಳು
ಭಾವನೆಗಳಲಿ ಬಂಧಗಳ ಬೆಸೆದಿತ್ತು!!

ಬೆರಗಾಗಿದ್ದೆ ಅವಳ ನೋಟಕೆ
ಆ ನಯನಕೆ
ಆತ್ಮಸ್ಥೈರ್ಯದ ಚಿಲುಮೆಯಂತಿದ್ದ
ದಿಟ್ಟ ದೃಷ್ಟಿಗೆ!!
ಕಣ್ಗಳೋ! ಕೋಲ್ಮಿಂಚೋ!!
ನೇರ ನಾಟಿತ್ತೆದೆಗೆ!
ನನ್ನ ವ್ಯಕ್ತಿತ್ವವನೇ ಮರೆಸಿ
ಮುತ್ತಿಡುವಂತೆ ಮಾಡಿತ್ತು...

ಮಹಲಾದರೇನು..? ಗುಡಿಸಿಲಾದರೇನು..?
ಕೋಟಿ ಕೊಡದಿದ್ದರೇನು..?
ನಗುವಿಗೆ ಯಾವುದೇ
ಹಂಗಿಲ್ಲದಿರುವಾಗ
ಯಾವ ಕೊರತೆಯಿದ್ದರೇನು..?
ಪರಮೈಶ್ವರ್ಯದೊಡತಿಯು
ಇವಳು ಸೌಂದರ್ಯವತಿ!
ನನ್ನ ಮಗಳಾಗದಿದ್ದರೇನು..?

ಮುತ್ತು ಮಣಿಗಳನ್ನ
ಒಂದೊಂದಾಗಿ ಹೆಕ್ಕಿ
ಪೋಣಿಸಿದಂತಾ ಆ ಹಲ್ಲುಗಳ
ದಿನವೂ ಲಂಚಕೊಟ್ಟು ಬಿರಿಸಿ
ಸಂತಸಪಡುತ್ತಿದ್ದೆ ಅಂದು..
ಬೇರೊಂದು ಮಗುವ
ಈ ಪಟದೊಳಗ್ಹೊಕ್ಕು
ಅವಳ ನೆನಪಾಗಿ ಬರೆದಿರುವೆ
ಸಮರ್ಪಣೆ ಅವಳಿಗೆಂದು....

1 comment:

Badarinath Palavalli said...

ಅವಳು ಭಗವಂತನ ಒಲುಮೆಯ ಪ್ರತಿರೂಪ.

ಕವನದ ಆಂತರ್ಯ ಮತ್ತು ಆಯ್ದುಕೊಂಡ ವಿಷಯ ಸೂಕ್ಷ್ಮತೆಗೆ ಶರಣು.