Tuesday, November 18, 2014

ಹೆಜ್ಜೆಯನಿತ್ತಲ್ಲೆಲ್ಲಾ


ಹೆಜ್ಜೆಯನಿತ್ತಲ್ಲೆಲ್ಲಾ ತಣ್ಣನೆ ಝರಿಯ ಹರಿವು
ಸವಿಸಿ ಹೊತ್ತೋಯ್ತು ಪಾದದಡಿಯ ನೆರಳ..
ಕದಡಿ, ಕಲಕಿ
ಮರೆಸಿಹೋಯ್ತು ಮನದ ಮುಗ್ಧತೆಯ...

ಮುಂದೆ ನಡೆದ ಹಾದಿಯಲ್ಲಿ ಸಿಕ್ಕ
ಒರಟುಕಲ್ಲು ತರಚಿಹೋಯ್ತು ಮೊದಲೇ ತೆರೆದ ಗಾಯವ
ಚುಚ್ಚಿ, ನಕ್ಕು
ನೆಕ್ಕಿಹೋಯ್ತು ತಾನೂ ರಕ್ತದ ರುಚಿಯ...

ಕುಂಟು ನಡೆ, ಎಡವು, ಬೀಳು
ಎದ್ದು ಓಡಿದೆ, ಸುಸ್ತಾಗಿ ನಿಂತೆ ದಣಿದು,
ಊರುಗೋಲ ತಡಕು ಮನದಲಿ
ಸುತ್ತಲಿತ್ತು ಬರೀ ಮರಳುಗಾಡ ಮೌನ
ಛಾಯೆ ಸಿಗದೇ, ಬಳಲಿ ಬೆಂಡಾದೆ ಕಗ್ಗತ್ತಲಲ್ಲಿ....
 
 

Saturday, November 8, 2014

ತುಟಿ ಬಿಚ್ಚಿ ಹೇಳದ...



ತುಟಿ ಬಿಚ್ಚಿ ಹೇಳದ
ಮನಗಳ
ಬೆಚ್ಚನೆಯ
ಭಾವಗಳ ಮಿಲನಕೆ
ಹುಣ್ಣಿಮೆಯ ಬೆಳದಿಂಗಳು
ಹೆಣೆದಿತ್ತು
ಸೋಬಾನೆ ಹಾಡ....

ಕುಡಿಮೀಸೆ ಚೆಲುವನ
ನೋಟಕೆ
ದಿಕ್ಕೆಟ್ಟು, ಅವಳ
ಎದೆಹೊಕ್ಕ ಕೋಗಿಲೆ
ಉಸಿರಿಡಿದು ಹಾಡಿತು
ಒಂದೇಸಮನೆ ತಾನಿತಂದಾನ....

ಅವಳಂದ ಚಂದ..
ಅವ ತುಂಟ ಬಂಡ..
ಬಿಡದೆ ಬಂದಿಸಿದ
ಕರವಿಡಿದು ಬರಸೆಳೆದು
ಮುಂಗುರುಳ ಸರಿಸಿ
ಬೇಡಿದ ಮುತ್ತಿನಹಾರ....

ಬಲು ದಾರಾಳಿಯವಳು
ಮೌನ ಬಂಗಾರಿ,
ನಕ್ಕು ಓಡಿದಳು
ಕೈ ಕಿತ್ತು
ಮುತ್ತಿನ ಕೊಪ್ಪರಿಗೆಯನ್ನೇ
ಕೈಗಿಟ್ಟು...
ಇರುವೆಗಳ ಬಾಯಲ್ಲೂ ಜೇನಿತ್ತು....
 

Thursday, November 6, 2014

ಹೊರಟೆ ಅರಸಿ...





            

     ನಾ ಹೊರಟೆ ಅರಸಿ,
 
    ಪ್ರೇಮವ ಹೃದಯಗಳಲಿ
     ಪ್ರೀತಿಯ ನಯನಗಳಲಿ
     ಮಮತೆಯ ಬಂಧುಗಳಲಿ
     ಸಾಂತ್ವನವ ಮಿತ್ರರಲಿ
     ದೇವರ ಗುಡಿಗಳಲಿ...
     ಎಲ್ಲೋ ಎಡವಿರುವೆ
     ಯಾರೂ ಸಿಗಲಿಲ್ಲ ಆ ವಿಳಾಸಗಳಲಿ....

Wednesday, November 5, 2014

ಮೋಹ...




ಹೀಗೇ ಕಣ್ಣಾಮುಚ್ಚೆ ಆಡುತ್ತಾ
ಕಚಗುಳಿಯಿಟ್ಟು
ನಗೆಹೂವ ಬಳ್ಳಿಯಲಿ
ಅರಳಿಸು ಒಲವೇ ತಾಪವಾ...

ಮೈನೆರೆವೆ ಮೋಹಿಸಿಬಿಡು,
ಭಾವಗಳ ಮೇಲ್ಛಾವಣಿಯ
ಒಡೆದು ನೀ ಹಾರುವಾಗ
ನಾ ಸವರುವೆ ಇಬ್ಬನಿಯಾ...


 

Tuesday, November 4, 2014

ತವರ ಸಿರಿ...


ಅಭಿವೃದ್ಧಿಯ ಕಾನನದ ನಡುವೆ
ನಡೆದಿರುವೆ ಹೆಜ್ಜೆಯಿಟ್ಟು..
ದೊಡ್ಡಮ್ಮ ಚಿಕ್ಕಮ್ಮಂದಿರ ಸೆಳೆವ ಮುದ್ದು
ಆತಿಥ್ಯದಲಿ ಮೆರೆದರೂ,
ಕನ್ನಡಾಂಬೆಯ ಅಮೃತಸುಧೆಯ...
ಪಾನಕೆ ತಲೆದೂಗುವುದೀ ಮನವು....


ಹಳದಿ ಸೀರೆ, ಕೆಂಪು ಬೊಟ್ಟ ತೊಟ್ಟು
ಸಹ್ಯಾದ್ರಿಯ ಹಸಿರ ಮುಡಿದು ನಗುವ
ಜಾತಿಯ ಬೇಲಿಯಿರದ ಈ ರೂಪವತಿಯ ಬಸಿರಲಿ
ನಾವು ಆರೂವರೆ ಕೋಟಿ ಕೂಸುಗಳು....

ಚಂಗನೆ ಜಿಗಿಯುವ ಜಿಂಕೆಯ
ಕಾಲ್ಗೆಜ್ಜೆದನಿಯ ಹೊನ್ನ ನವಿರಾದ ರೋಮಾಂಚನ
ಅವಳ ಚರಿತೆ ಕಿವಿಗಿಳಿದರೆ..
ಕರುನಾಡ ಜೋಗದಸಿರಿಯೇ ಎದೆಗಿಳಿವುದು,
ತೂಗುವ ತುಂಬಿದ ರಾಗಿಯ ತೆನೆಯಂತೆ
ಮೈಮನವೂ ನುಲಿಯುವುದು
ಅವಳು ನನ್ನತ್ತ ಸುಳಿದರೆ....

ಹಿಗ್ಗಿರಲಿ - ಕುಗ್ಗಿರಲಿ
ಕುತಂತ್ರವಿರಲಿ - ಕಟ್ಟಪ್ಪಣೆಯಿರಲಿ
ಆಶಯದ ಅರಮನೆಯಲಿ
ಗಂಧದ ಘಮವ ಹೀರಿ ಬೆಳೆದ
ಶಿರದ ಉತ್ತುಂಗದಲಿ, ಕರುನಾಡ
ಪತಾಕೆಯ ಹಾರಾಟ ಚಿರವಾಗಿರಲಿ..
ಅಕ್ಷಯವಾಗಲಿ, ಮಂತ್ರವಾಗಲಿ ಕನ್ನಡ
ರಾರಾಜಿಸಲಿ, ಅಳಿಯದಿರಲಿ ವರ್ಣಮಾಲೆಯ ರಂಗವಲ್ಲಿ....

ಚಂದಿರ ನೀ ನೀಡು ತಂಪ
ಪ್ರಜ್ವಲಿಸಿ, ಅಲಂಕರಿಸು ನನ್ನ ತಾಯ
ಮುಡಿ ಮಲ್ಲಿಗೆಯಲ್ಲಿ..
ಕನ್ನಡಿಗರೇ ಬನ್ನಿ ಪೋಣಿಸಿ ಕಟ್ಟೋಣ
ಅಕ್ಷರಗಳ ಹಸಿರು ತೋರಣ ಬೆಳಕ ವಿಸ್ತಾರದಲ್ಲಿ..
ಮಹಾಮಾತೆಯ ಉತ್ಸವವಿಂದು
ಕನ್ನಡ ರಾಜ್ಯೋತ್ಸವವಾಗಲಿ ನಿತ್ಯೋತ್ಸವ ಎಲ್ಲರ ಎದೆಗೂಡಲ್ಲಿ..........
ಜೈ ಕರ್ನಾಟಕ ಮಾತೆ.......

---- ಅಕ್ಷತ. ಎನ್. ಗೌಡ ----