Saturday, October 31, 2015

ಕೊನೆಯದಲ್ಲವೋ ಅದು

ಕೊನೆಯದಲ್ಲವೋ ಅದು
ಕಪ್ಪೆಚಿಪ್ಪಿನೊಳಗೆ ತಣ್ಣಗೆ ಹುಟ್ಟಿದ್ದಲ್ಲವೋ,
ಎದೆಗೂಡಲ್ಲಿ ಬೆಚ್ಚಗೆ ಅಡಗಿ
ಸಿಹಿಜೇನ ಹೀರಿ
ನರಮಂಡಲದ ಬಸಿರ ಚೀರಿ
ನಿನ್ನ ಅಧರಗಳ ಸೋಕಿ
ನೀಲಾಕಾಶವ ಕೆಂಪಾಗಿಸಿದ್ದು
ಮಣಿಯಲ್ಲವೋ ಅದು,
ಕೃತಕವಲ್ಲವೋ.....

ಅಂದಲ್ಲವೋ, ಇಂದಿಗೂ 
ನೀ ದೇವನಂತಲ್ಲಾ, ನಾ ಭಕ್ತೆಯಂತಲ್ಲಾ
ಇರುಳ ತಾರೆಗಳೂ ಪಥ ಬದಲಿಸಿದರೂ
ಉರುಳೀ ಉರುಳೀ 
ನಿನ್ನೇ ಧ್ಯಾನಿಸಿದ್ದು ಜಪವಲ್ಲವೋ,
ಹರಕೆಯಿಲ್ಲದ, ಕಾಣಿಕೆಯಿಲ್ಲದ ಆರಾಧನೆ
ರೋಗವಲ್ಲವೋ ಇದು,
ಜಾಗರಣೆಯಲ್ಲವೋ.....

ಪದವಲ್ಲವೋ ಇದು
ಭಾವಕ್ಕೆ ಕನ್ನಡಿಯಿಲ್ಲವೋ,
ಅಕ್ಷರಗಳ ಹುಸಿನಗೆ ಸಾಕೆನಗೆ
ಉಸಿರ ಅಲೆಗಳಲ್ಲಿ ಏರಿಳಿತಗಳಿಲ್ಲ
ಮಾಮರದಲಿ ಚಿಲಿಪಿಲಿಗಳಿಲ್ಲಾ,
ನಯನಗಳಲಿ ಕದಡಿದೆ ನಿನ್ನ ಅಲಂಕಾರ
ಬಾಹುಗಳು ಮರೆತಿವೆ ತಾಳ,
ಮರಳ ಬೇಕಾದ್ದು ಸ್ವರಗಳಲ್ಲವೋ
ಹೊಮ್ಮ ಬೇಕಾದ್ದು ಸಂಗೀತವಲ್ಲವೋ
ರಾಗವಲ್ಲವೋ ಅದು,
ಹೃದಯದ ಮಿಡಿತವೋ... 
ಒಲವಿನ ಓಕುಳಿಯೋ...........

1 comment:

Vinod Kumar Bangalore said...

ಚೆನ್ನಾಗಿದೆ