Tuesday, November 4, 2014

ತವರ ಸಿರಿ...


ಅಭಿವೃದ್ಧಿಯ ಕಾನನದ ನಡುವೆ
ನಡೆದಿರುವೆ ಹೆಜ್ಜೆಯಿಟ್ಟು..
ದೊಡ್ಡಮ್ಮ ಚಿಕ್ಕಮ್ಮಂದಿರ ಸೆಳೆವ ಮುದ್ದು
ಆತಿಥ್ಯದಲಿ ಮೆರೆದರೂ,
ಕನ್ನಡಾಂಬೆಯ ಅಮೃತಸುಧೆಯ...
ಪಾನಕೆ ತಲೆದೂಗುವುದೀ ಮನವು....


ಹಳದಿ ಸೀರೆ, ಕೆಂಪು ಬೊಟ್ಟ ತೊಟ್ಟು
ಸಹ್ಯಾದ್ರಿಯ ಹಸಿರ ಮುಡಿದು ನಗುವ
ಜಾತಿಯ ಬೇಲಿಯಿರದ ಈ ರೂಪವತಿಯ ಬಸಿರಲಿ
ನಾವು ಆರೂವರೆ ಕೋಟಿ ಕೂಸುಗಳು....

ಚಂಗನೆ ಜಿಗಿಯುವ ಜಿಂಕೆಯ
ಕಾಲ್ಗೆಜ್ಜೆದನಿಯ ಹೊನ್ನ ನವಿರಾದ ರೋಮಾಂಚನ
ಅವಳ ಚರಿತೆ ಕಿವಿಗಿಳಿದರೆ..
ಕರುನಾಡ ಜೋಗದಸಿರಿಯೇ ಎದೆಗಿಳಿವುದು,
ತೂಗುವ ತುಂಬಿದ ರಾಗಿಯ ತೆನೆಯಂತೆ
ಮೈಮನವೂ ನುಲಿಯುವುದು
ಅವಳು ನನ್ನತ್ತ ಸುಳಿದರೆ....

ಹಿಗ್ಗಿರಲಿ - ಕುಗ್ಗಿರಲಿ
ಕುತಂತ್ರವಿರಲಿ - ಕಟ್ಟಪ್ಪಣೆಯಿರಲಿ
ಆಶಯದ ಅರಮನೆಯಲಿ
ಗಂಧದ ಘಮವ ಹೀರಿ ಬೆಳೆದ
ಶಿರದ ಉತ್ತುಂಗದಲಿ, ಕರುನಾಡ
ಪತಾಕೆಯ ಹಾರಾಟ ಚಿರವಾಗಿರಲಿ..
ಅಕ್ಷಯವಾಗಲಿ, ಮಂತ್ರವಾಗಲಿ ಕನ್ನಡ
ರಾರಾಜಿಸಲಿ, ಅಳಿಯದಿರಲಿ ವರ್ಣಮಾಲೆಯ ರಂಗವಲ್ಲಿ....

ಚಂದಿರ ನೀ ನೀಡು ತಂಪ
ಪ್ರಜ್ವಲಿಸಿ, ಅಲಂಕರಿಸು ನನ್ನ ತಾಯ
ಮುಡಿ ಮಲ್ಲಿಗೆಯಲ್ಲಿ..
ಕನ್ನಡಿಗರೇ ಬನ್ನಿ ಪೋಣಿಸಿ ಕಟ್ಟೋಣ
ಅಕ್ಷರಗಳ ಹಸಿರು ತೋರಣ ಬೆಳಕ ವಿಸ್ತಾರದಲ್ಲಿ..
ಮಹಾಮಾತೆಯ ಉತ್ಸವವಿಂದು
ಕನ್ನಡ ರಾಜ್ಯೋತ್ಸವವಾಗಲಿ ನಿತ್ಯೋತ್ಸವ ಎಲ್ಲರ ಎದೆಗೂಡಲ್ಲಿ..........
ಜೈ ಕರ್ನಾಟಕ ಮಾತೆ.......

---- ಅಕ್ಷತ. ಎನ್. ಗೌಡ ----

1 comment:

Badarinath Palavalli said...

ತಮಗೂ ತಮ್ಮ ಬ್ಲಾಗಿಗೂ ಕನ್ನಡ ರಾಜ್ಯೋತ್ವದ ಶುಭಾಶಯಗಳು.
"ಅಕ್ಷಯವಾಗಲಿ, ಮಂತ್ರವಾಗಲಿ ಕನ್ನಡ"
ತಮ್ಮ ಆಶಯವು ನಮಗೆಲ್ಲ ಸ್ಪೂರ್ತಿಯಾಗಲಿ.

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ
ಸಿರಿಗನ್ನಡಂ ಬ್ಲಾಗ್ಗೆ