Saturday, April 26, 2014

ಹಕ್ಕಿಗಳಿಗೊಂದು ತುತ್ತು...

ರೆಕ್ಕೆ ಇದ್ದರೆ ಸಾಕೇ......
ಹಕ್ಕಿಗೆ ಬೇಕು ಬಾನು
ಹೊಟ್ಟೆಗೆ ಹೂವು ಹಣ್ಣು
ಬಾಯಿಗೆ ಗುಟುಕು ನೀರು
ಬದುಕೋಕೇ...
ಮರಳಿ ಬರೋಕೇ...
ಇಂಪ ಹರಡೋಕೇ.......

ಪಕ್ಷಿಗಳು ಬೆಂಗಳೂರಿಗೆ ಬರುತ್ತಿಲ್ಲ..
ಕಾರಣ ಏನೋ ಗೊತ್ತಿಲ್ಲ..

     ಮರಗಳ ಸಂಖ್ಯೆ ಕ್ಷೀಣಿಸುತ್ತರುವುದೇನೋ ನಿಜ, ಪಕ್ಷಿಗಳಿಗೆ ತಾವಿಲ್ಲ. ಆದರೆ ಇರುವ ಮರಗಳಲ್ಲೂ ಅವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಅಲ್ಲಲ್ಲಿ ಕೆರೆ ಕೊಳಗಳಿದ್ದರೂ ನೀರು ಕಲುಷಿತಗೊಂಡಿದ್ದು ಪಕ್ಷಿಗಳಿಗೆ ಕುಡಿಯಲು ಯೋಗ್ಯವಿಲ್ಲ. ಇದೇ ಯೋಚನೆ ನನ್ನನ್ನು ಬಹಳವಾಗಿ ಕಾಡುತ್ತಿತ್ತು.

    ಕೆಲವರು ಅನೇಕ ಉತ್ತಮ ಪರಿಹಾರ ಸೂಚಿಸಿದ್ದಾರೆ. ಮನೆಯ ಹೊರಗೆ ನೀರಿಡುವುದು, ಸಣ್ಣ ದಾನ್ಯ ಇಡುವುದು ಇತ್ಯಾದಿ. ನಾನೂ ಅನುಸರಿಸಿ ಪ್ರಯೋಜನ ಆಗಿದ್ದೇನೋ ನಿಜ. ಆದರೆ ಇದು ಶಾಶ್ವತ ಪರಿಹಾರವಲ್ಲ ಅನಿಸಿತು. ಎಲ್ಲರೂ ಇದನ್ನು ಅನುಸರಿಸಲು ಆಗದಿರಬಹುದು. ಮರೆತೇ ಹೋಗಬಹುದು.

     ಬಹಳ ದಿನಗಳಿಂದ ಹೀಗೇ ಯೋಚಿಸುತ್ತಿರುವಾಗ ನನಗೆ ಹೊಳೆದದ್ದು ಒಂದು ಮುಖ್ಯವಾದ ಅಂಶ. ಬೆಂಗಳೂರಿನಲ್ಲಿ ಈಗ ಎಲ್ಲಿ ನೋಡಿದ್ರೂ ಎಲೆ ಭರಿತ, ಇಲ್ಲವೇ ಹೂ ಬಿರಿದ ಮರಗಳು ಮಾತ್ರ ಇವೆ. ಹೀಗಾದಲ್ಲಿ ಪಕ್ಷಿಗಳು ತಿನ್ನುವುದಾದರೂ ಏನು? ನೀವೇ ಕಂಡಂತೆ ಮೊದಲು ಊರ ತುಂಬಾ ಆಲದ, ಅರಳಿ ಮುಂತಾದ ಮರಗಳಿದ್ದು, ಅಲ್ಲಿನ ಹಣ್ಣುಗಳು ಹಲವು ಪಕ್ಷಿಗಳ ಆಧಾರವಾಗಿತ್ತು. ಹಕ್ಕಿ ಗೂಡಿಗೆ ಆಶ್ರಯವಾಗಿದ್ದವು ಮರಗಳು. ಬದಲಾದ ಪರಿಸ್ಥಿತಿಗೆ ಮೇವಿನ ಅಭಾವವೂ ಒಂದು ಮುಖ್ಯ ಕಾರಣವಿರಬಹುದೇನೋ ಅನಿಸಿತು.

     ಇಂದಿಗೂ ಮನೆಯ ಮುಂದಿನ ಮರಗಳಲ್ಲಿ ಹಕ್ಕಿಗಳು ಹಣ್ಣು ತಿಂದು ಮನೆಯಂಗಳದಲ್ಲಿ ಗಲೀಜು ಮಾಡುತ್ತವೆಂದು ಮರವನ್ನೇ ಕಡಿದು ಹಾಕುತ್ತಲೇ ಇದ್ದಾರೆ. ಹಕ್ಕಿಗಳು ನೆಲೆಯಿಲ್ಲದೆ, ಹೊಟ್ಟೆ ಪಾಡಿಗಾಗಿ ವಲಸೆ ಹೋಗಲಾರಂಬಿಸಿವೆ.

      ಅದಕ್ಕೆ ನಿರ್ಧರಿಸಿದೆ ಪಕ್ಷಿಗಳಿಗೆ ಉಪಯೋಗವಾಗುವ ಗಿಡ ನೆಡಬೇಕೆಂದು. ಈಗ ಸಸಿಯನ್ನು ನೆಟ್ಟಿದ್ದೇನೆ ಮನೆಯ ಎದುರಲ್ಲಿ. ನೀರಿಡುವುದು, ಆಹಾರಕ್ಕಾಗಿ ಕಾಳು, ರಾಗಿ ಮುಂತಾದ ಬೀಜಗಳನ್ನು ಇಡುವುದನ್ನೂ ಮುಂದುವರೆಸಿದ್ದೇನೆ. ಇತರರಿಗೂ ತಿಳಿಸುತಿದ್ದೇನೆ. ನೀವೂ ಸಹಕರಿಸುತ್ತೀರಿ ಎಂಬ ಆಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳುವ ಉತ್ಸಾಹ ನನ್ನಲ್ಲಿ...

2 comments:

Badarinath Palavalli said...

ತಮ್ಮ ಈ ಸಹೃದಯತೆ ನಮಗೂ ಬರಲಿ.
ನಗರದಲ್ಲಿ ಹಕ್ಕಿಗಳ ಚಿಲಿಪಿಲಿ ನಿರಂತರವಾಗಿರಲಿ.

Unknown said...

ನಿಮ್ಮಂತೆ ಎಲ್ಲರೂ ಸಹಕರಿಸಿದರೆ ಖಂಡಿತ ಸಾಧ್ಯ. thank you