Saturday, October 25, 2014

ಮುಳ್ಳು...


ತೀರದ ನೌಕೆಗೆ ಕೈ ಚಾಚಿದೇ ಮನ
ನಿಲುಕದ ಪ್ರೀತಿಗೆ ಕಾತರಿಸಿದೇ ದಿನ..
ನಿತ್ಯ ಜಂಜಡದಲಿ ಸವೆಯುವ ಹೃದಯದಲಿ
ನಿನಗಾಗಿ ಗೆಳೆಯನೆ ಹೃನ್ಮನದ ಪೂಜನ....
 
ಎಷ್ಟು ನಾದಿದರೂ ನಾ ಕಟ್ಟಬಲ್ಲೆನೇ ಮರಳ ಗೂಡ
ಪ್ರತಿಷ್ಟಾಪಿಸಬಲ್ಲೆನೇ ಅದರೊಳಗೆ ಶಿವಲಿಂಗವ..
ನೆರವೇರದಾ ಅಭೀಷ್ಟದ ಸಿದ್ಧಿಗಾಗಿ
ಮೌಢ್ಯದ ಕೂಪದಿಂದ ಬಸೆದ ಕಣ್ಣೀರ ಅಭಿಷೇಕ
ದೈತ್ಯ ಮುಳ್ಳುಗಳಿಟ್ಟ ಮುಹೂರ್ತ, ಅವೇ ಸುತ್ತಮುತ್ತ....
 
ನೂರಾರು ಸಹಚರರು ಈ ಬಾಳ ಸಂತೆಯಲ್ಲಿ
ಕಡಲ ಪಥದಲ್ಲಿ ಒಂಟಿ ನಾನು ಪ್ರತಿ ಈಜಿನಲ್ಲಿ
ಕೈ ಹಿಡಿಯದ ದೂರ್ತರು ಮುಳುಗಿನಲ್ಲೂ..
ಕ್ರಮಿಸಲಾಗದ ಹೆಜ್ಜೆಗಳ ಸಂಕಲನ..
ನೆಲಕಚ್ಚಿದರೆ ಯಾರೂಬರರಿಲ್ಲಿ ಉಸಿರ ಭರಿಸಲು.....
 
ಬಿದ್ದರೆ ನೆಟಿಗೆ ಮುರಿವರು
ಹಾಳಾಗೆನುತ ಮೂತಿ ತಿರುವುವರು
ಸಾಲಾಗಿ ಹಲ್ಲುಮಸೆಯುತ್ತಾ ಕಾಗೆಗಳು ಪಿಂಡ ನುಂಗಲು..
ಸಾಕಿನ್ನು ಈ ಹೋರಾಟ, ಹುಸಿನಗೆಯ ತುಚ್ಛ ಜನ್ಮ,
ಕೊಳ್ಳಿಯಿಡು ಬೇಗ, ಮುಕ್ತಿ ಕೊಟ್ಟುಬಿಡು....

Wednesday, June 18, 2014

ಎಲ್ಲಿದೆ ನನ್ನ ಮನೆ...



ಎಲ್ಲಿದೆ ನನ್ನ ಮನೆ...??               
ಯಾರು ನನ್ನವರು..??
 
ಈಗಲಾದರೂ ಹೇಳು ದೇವ
ನಿನ್ನ ಗಂಡನ ಮನೆಯೇ
ನಿನ್ನದೆಂದು ಹೇಳಿ
ಕಟುಕರಿಗೆ ನನ್ನ ಕೊರಳಿಟ್ಟು
ಹೆತ್ತವಳೇ ಸಂಭ್ರಮಿಸಿದಳಲ್ಲಾ!!
ತವರು ಯಾಕಲ್ಲಾ ನನ್ನಮನೆ..??
 
ಮಗಳೇ ಎಂದು ಕರೆದೊಯ್ದು
ಮಾತುಮಾತಿಗೂ ಇದೆಯೇ
ಕಲಿತದ್ದೆಂದು ಹೀಯಾಳಿಸಿ,
ಪೀಡಿಸಿ, ಹಿಂಸಿಸಿ
ಉಪವಾಸ ಕೆಡುವಿದರಲ್ಲಾ!!
ಇವರು ಯಾಕಲ್ಲಾ
ನನ್ನವರು..??
 
ಉಳಿದವನೊಬ್ಬ ನನ್ನವ
ಕಂಠಪೂರ್ತಿ ಕುಡಿದು
ಬಿದ್ದು ಹೊರಳಿ ಒದ್ದಾಡಿ
ಬಂದು ಹೊಲಸುಲಿದು
ಜುಟ್ಟಿಡಿದು ಒದೆಯುವನಲ್ಲಾ!!
ಪತಿ ಯಾಕಲ್ಲಾ ಪರದೈವ..??
 
ಇಷ್ಟೆಲ್ಲದರ ಮಧ್ಯೆ ನೋವೊಂದೆಡೆ,
ಬಾಯಲ್ಲಿ ಅಯ್ಯೋ ಎಂದು
ಬೇರೆಲ್ಲೋ ಏನಿದೆಯೋ
ಎನ್ನುವ ಜಗವೊಂದೆಡೆ
ಕುಗ್ಗಸಿ ಸುಡುತಿದೆಯಲ್ಲಾ!!
ಹೇಳು ಎಲ್ಲಿದೆ ನನ್ನಮನೆ..??
 
ನೋಡು ಈ ಪುಟ್ಟ ಕೈಗಳು
ಮಾತ್ರ ನನ್ನವು...
ಬೃಹತ್ ವೃಕ್ಷದಂತೆ
ಆಸರೆಯನಿತ್ತಿವೆ ಬಾಳಲಿ...
ನನ್ನದೊಂದು ಪುಟ್ಟ "ಸೂರು"
ಅದರ ಎದೆಗೂಡಲಿ......

Monday, June 2, 2014

ಮೌನ ಮಾತಾದಾಗ...


ಸಂಗಾತಿಯೇ ನಿನ್ನ ಮೌನ ನನಗಿಷ್ಟ..!
ನಿನ್ನ ಕಣ್ಣ ಮಿಂಚು ನನ್ನ ಸೆಳೆವಾಗ,
ನನಗಾಗಿ ಹಾತೊರೆದು ಕಾಯುವಾಗ,
ನಾ ಬಂದಾಗ ಹುಸಿಮುನಿಸ ನೀ ತಳೆವಾಗ...!!
 
ಸೂಜಿಮೊನೆಯಂಥ ನಿನ್ನ ಕಣ್ಣುಗಳು ನನಗಿಷ್ಟ..!
ನನ್ನ ಕಣ್ಣೀರಿಗೆ ನಿನ್ನ ರೆಪ್ಪೆಗಳು ನೆನೆವಾಗ,
ಕಣ್ಣ ಸನ್ನೆಯಲ್ಲೇ ನನ್ನ ಬಳಿ ಕರೆವಾಗ,
ಕಣ್ಣ್ಮುಚ್ಚಿ ನನ್ನ ಕಣ್ಣುಗಳ ನೀ ಚುಂಬಿಸುವಾಗ...!!

ನಿನ್ನ ಬಾಹುಗಳ ಬಂಧನ ನನಗಿಷ್ಟ..!
ನನ್ನ ಬಳಸಿ ನಿನ್ನ ಎದೆಬಡಿತ ಏರಿದಾಗ,
ಹೋಗೊಡದೆ ನನ್ನೆಳೆದು ನಿನ್ನಲ್ಲೇ ಬಂಧಿಸುವಾಗ,
ನಿನ್ನ ಶಕ್ತಿಗೆ ನಾ ಸೋತು ನೀರಾದಾಗ...!!

ತಂಗಾಳಿಯು ನನ್ನಂತರಾಳವ ಝಲ್ಲೆನಿಸುವಾಗ..!
ಮೇಘನು ಭೋರ್ಗೊರೆದು ನನ್ನ ಸಂಯಮ ಕಸಿಯುವಾಗ..!
ಸಾಗರದ ಅಲೆಗಳು ಬಂದೆನ್ನಪ್ಪಳಿಸಿದಂತಾದಾಗ
ನಿನ್ನ ಸಾಮೀಪ್ಯವನೇ ಬಯಸುವ ಹೃದಯಕೆ
ನೀನಿಷ್ಟ..!! ನೀನಿಷ್ಟ..!! ನೀನಿಷ್ಟ..!!

Saturday, May 24, 2014

ನಿಸ್ವಾರ್ಥವಿರಲಿ...

ನಿಸ್ವಾರ್ಥವಿರಲಿ ನಿನ್ನ ನೆರವಲಿ, ಪರೋಪಕಾರದಲಿ.!
ಕಾಯದಿರು ಫಲ ನಿರೀಕ್ಷೆಯಲಿ...
ಮಾಡಿದ ಕರ್ಮವು ಕಳೆದುಹೋಗುವುದು..!
ಮನನವಿರಲಿ, ಬಿಟ್ಟ ಬಾಣವು ಎಂದೆಂದೂ
ಪುನಃ ಬತ್ತಳಿಕೆಗೆ ಮರಳಿಬರದು..!!

ಎಲ್ಲರಿಗೂ ಆದರ್ಶ ನೀನಾಗಿ
ನಿನ್ನ ಕಾಯಕವ ನೀಮಾಡುತ
ಮುನ್ನಡೆಯಬೇಕು ಎಂದೂ ಕಂಗೆಡದೆ..!
ಬಾರದ ಮಳೆಗೆ ಮರುಗುತ್ತಾ ತಲೆಮೇಲೆ
ಕೈ ಹೊತ್ತು ಕುಳಿತರೆ ಬರವೇ ನಿನಗೆ..!!

ದಿಟ್ಟ ನಡೆಯಿರಲಿ, ನೇರ ನುಡಿಯಿರಲಿ,
ಅನ್ಯ - ಪರರೆಂಬ
ತಾರತಮ್ಯವಿರದಿರಲಿ ಎಂತೆಂದರೆ;
ಪ್ರತಿಪಲಿಸಬೇಕು ನಿನ್ನ ವ್ಯಕ್ತಿತ್ವ
ಕಠೋರ, ತೀಕ್ಷ್ಣವಾದರೂ ಪ್ರಿಯವಾಗುವ ಅಮೂಲ್ಯ ವಜ್ರದಹಾಗೆ..!!

ನಿನ್ನೆಲ್ಲಾ ಸಹಾಯಗಳ ನೆನಪುಗಳನು
ಗಂಟುಕಟ್ಟಿ ದೂರದ ಜಗದಲಿಹೂತಿಟ್ಟು ಮರೆತುಬಿಡು..!
ದಯೆಯೇ ಧರ್ಮದ ಮೂಲವೆಂದೆನುವಂತೆ
ನಿನ್ನ ಮೇಲೆ ನೀನೇ ದಯೆತೋರಿದಾಗಲಷ್ಟೇ
ಪ್ರೇಮಜ್ಯೋತಿಯ ಬೆಳಗುತ್ತಾ
ಧರ್ಮ ಮಾರ್ಗದಲಿ ಮುನ್ನುಗ್ಗಬಹುದು ಎಳೆ ಮಗುವಂತೆ...!!

Thursday, May 15, 2014

ಅವಳು...

ಅವಳಾ... ಆ
ಪುಟ್ಟ ಹುಡುಗಿಯ ಕಂಗೊಳಿಸುವ
ಮುಗ್ಧ ನಗುವು, ನನಗಾಗಿ
ಹೆಣೆದ ಮಾಯಾಜಾಲದಿ
ಸಿಲುಕಿದ್ದ ನನ್ನೊಳಗೆ
ಅವಳದೇ ಚಿತ್ತಾರ ಮೂಡಿಸಿತ್ತು!!
ಆ ಚಕೋರಿಯ ತುಂಟಾಟಗಳು
ಭಾವನೆಗಳಲಿ ಬಂಧಗಳ ಬೆಸೆದಿತ್ತು!!

ಬೆರಗಾಗಿದ್ದೆ ಅವಳ ನೋಟಕೆ
ಆ ನಯನಕೆ
ಆತ್ಮಸ್ಥೈರ್ಯದ ಚಿಲುಮೆಯಂತಿದ್ದ
ದಿಟ್ಟ ದೃಷ್ಟಿಗೆ!!
ಕಣ್ಗಳೋ! ಕೋಲ್ಮಿಂಚೋ!!
ನೇರ ನಾಟಿತ್ತೆದೆಗೆ!
ನನ್ನ ವ್ಯಕ್ತಿತ್ವವನೇ ಮರೆಸಿ
ಮುತ್ತಿಡುವಂತೆ ಮಾಡಿತ್ತು...

ಮಹಲಾದರೇನು..? ಗುಡಿಸಿಲಾದರೇನು..?
ಕೋಟಿ ಕೊಡದಿದ್ದರೇನು..?
ನಗುವಿಗೆ ಯಾವುದೇ
ಹಂಗಿಲ್ಲದಿರುವಾಗ
ಯಾವ ಕೊರತೆಯಿದ್ದರೇನು..?
ಪರಮೈಶ್ವರ್ಯದೊಡತಿಯು
ಇವಳು ಸೌಂದರ್ಯವತಿ!
ನನ್ನ ಮಗಳಾಗದಿದ್ದರೇನು..?

ಮುತ್ತು ಮಣಿಗಳನ್ನ
ಒಂದೊಂದಾಗಿ ಹೆಕ್ಕಿ
ಪೋಣಿಸಿದಂತಾ ಆ ಹಲ್ಲುಗಳ
ದಿನವೂ ಲಂಚಕೊಟ್ಟು ಬಿರಿಸಿ
ಸಂತಸಪಡುತ್ತಿದ್ದೆ ಅಂದು..
ಬೇರೊಂದು ಮಗುವ
ಈ ಪಟದೊಳಗ್ಹೊಕ್ಕು
ಅವಳ ನೆನಪಾಗಿ ಬರೆದಿರುವೆ
ಸಮರ್ಪಣೆ ಅವಳಿಗೆಂದು....

Tuesday, April 29, 2014

ಸಮಯನಿಷ್ಟೆ...

ಸಮಯ
ಸಮಯ
ಸಮಯ.....
ಜಾರುತಿದೆ ಕೈಯಿಂದ
ಬರೆಯುತ್ತಾ ಬಾಳ ಕೃತಿಯ
ಬೆರೆಸುತ್ತಾ ವಿಭಿನ್ನ ಶೃತಿಯ....

ಬಾಲ್ಯದಿ ಬೆಳೆವಾಸೆ
ಬೆಳೆದು ಅಮ್ಮನ ಸೀರೆಯಾಸೆ
ಉದ್ದನೆಯ ನೀರ್ಜಡೆಯಾಸೆ
ಕೈಬಳೆ ತೊಟ್ಟು ಕುಲುಕುವಾಸೆ
ಜುಮುಕಿ, ಕಾಲ್ಗೆಜ್ಜೆ, ಮಲ್ಲಿಗೆಯಾಸೆ
ಹೋ... ಈ ಲಜ್ಜೆ... ಆದರೂ
ಎಲ್ಲರ ಹೊಗಳಿಕೆಯಾಸೆ.....

ಸಮಯವೇ ತಂದಿತ್ತು
ಯೌವನವ ಉಡುಗೊರೆಯಾಗಿ
ಅದು, ಇದು ಎನುವುದರಲೇ
ಮಾಡಿ ಮಧುಮಗನ ಸಂಗಾತಿಯಾಗಿ
ಬರೆಯುತ್ತಾ ಬಾಳ ಕೃತಿಯ
ಬೆರೆಸುತ್ತಾ ಮೋಹಕ ಶೃತಿಯ....

ಬಾಳಲ್ಲವನ ಬೆಳಕಾಗುವಾಸೆ
ಪ್ರಿಯಕರನ ಮುದ್ದಿನ ಕಣ್ಮಣಿಯಾಗುವಾಸೆ
ಅವನ ತೋಳಲ್ಲಿ ಜಗಮರೆಯುವಾಸೆ
ಬೈತಲೆಯಲಿ ಕುಂಕುಮದಾಸೆ
ಕಾಲುಂಗುರ, ಮಾಂಗಲ್ಯ ಧರಿಸಿ ಮೆರೆಯುವಾಸೆ
ಹೋ... ದೊಡ್ಡವಳು... ಆದರೂ
ನಲ್ಮೆಯ ಹೊಗಳಿಕೆಯಾಸೆ......

ಸಮಯವೋ ಸಾಗಿದೆ
ಮರೆಯದೆ ಕರ್ತವ್ಯನಿಷ್ಠೆಯ
ಬರೆಯುತ್ತಾ ಬಾಳ ಕೃತಿಯ
ಬೆರೆಸುತ್ತಾ ಬಾಳಲ್ಲಿ ಒಲವಿನ ಶೃತಿಯ....

Saturday, April 26, 2014

ಅನ್ನದಾತ...

ಹುಂಜ ಕೂಗಿದ್ ಕೂಡ್ಲೇ
ಕೊಡವಿಕೊಂಡೆದ್ದ ಜುಂಜ
ಮುರ್ಕೊಂಡು ಬೇವ ಕಡ್ಡಿ
ತೀಡುತ್ತ ಹಲ್ಲು ಬಾಯ
ಶುರಚ್ಕೊಂಡ ಹೊಲ್ದ್ಯಾಗ್ ಕ್ಯಾಮಿ
ಹೊಡ್ದು ಮಜ್ಗೆ ಗಂಜಿಯ....

ಹೆಂಡ್ರು ಹೊತ್ತು ತಂದ
ಉಪ್ಸಾರು ಸೊಪ್ಪಿನೊಡನೆ
ಮುದ್ದೆ ಮುರಿದು ನುಂಗ್ದ
ಮೆಣಸ್ಕಾಯಿ ನೆಂಚಿಕೊಳ್ತ
ನಂಜೀಯ ಕೈ ಹಿಡ್ದು
ಕಣ್ಹೊಡ್ದು ಹಲ್ಲ ಬಿರಿದ....

ದಿನ್ವೆಲ್ಲ ದಣೀದೆ ಗೇದು
ಬೆವ್ರ ಸುರ್ಸಿ ಮೂಳೆಯಾದ್ರೂ
ಮುಖದಾಗೆ ತೇಜವಂತ
ಸೂರ್ಯಂಗು ಗೋಲಿ ಹೊಡ್ದ
ಮಳ್ಯಾಗೆ ಹಿಗ್ಗಿ ಕುಣಿದು
ಕಣಜಾವ ಜಡಿದು ತುಂಬಿ
ದೇಶಾದ ಹೊಟ್ಟೆ ಹೊರ್ದ
ನಮ್ಮೆಲ್ರ ಅನ್ನದಾತ....

ಹರಸ್ರೀ ನೀವೂ ಇವ್ನ
ತಣ್ಣಗಿರ್ಲಿ ಅಂತ....